ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್-
ತಾತಾ ಇನ್‍ಸ್ಟಿಟ್ಯೂಟ್ ಎಂದೂ ಹೆಸರಿದೆ. ಬೆಂಗಳೂರಿನಲ್ಲಿರುವ ಈ ಸಂಸ್ಥೆ ಭಾರತದ ಸಂಶೋಧನಾಲಯಗಳಲ್ಲಿ ಬಹು ಮುಖ್ಯವಾದದ್ದು.

	ಚಾರಿತ್ರಿಕ ಹಿನ್ನೆಲೆ : ಭಾರತಕ್ಕೆ ಇಂಥದೊಂದು ಸಂಸ್ಥೆ ಅವಶ್ಯಕವೆಂದು ಮೊದಲು ಯೋಚಿಸಿದವರು ಬೊಂಬಾಯಿಯ ಸುಪ್ರಸಿದ್ಧ ಕೈಗಾರಿಕೋದ್ಯಮಿ ಜಮ್ ಶೆಡ್‍ಜಿ ನಸರವಾನ್‍ಜಿ ತಾತಾರವರು. ದೂರದರ್ಶಿಗಳಾದ ಇವರು ಭಾರತ ಮುಂದೆ ಬರಬೇಕಾದರೆ ಕೇವಲ ಕೃಷಿಯೊಂದನ್ನೇ ಅವಲಂಬಿಸಿರುವುದರ ಬದಲು ತನ್ನ ಅಪಾರ ಪ್ರಕೃತಿ ಸಂಪತ್ತನ್ನು ಉಪಯೋಗಿಸಿ ಕೈಗಾರಿಕೆಗಳನ್ನು ಬೆಳೆಸಿಕೊಳ್ಳಬೇಕೆಂದು ಗ್ರಹಿಸಿದರು. ಪಾಶ್ಚಾತ್ಯ ದೇಶಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೂ ವೈe್ಞÁನಿಕ ಸಂಶೋಧನೆ ಮತ್ತು ಪ್ರೌಢ ವ್ಯಾಸಂಗ ನಡೆಯಲು ಅನುಕೂಲವಾದ ಸಂಸ್ಥೆಯನ್ನು ಸ್ಥಾಪಿಸಲು ಮುಂದಾದರು. ಒಂದು ಸಮಾಜ ಅಥವಾ ದೇಶ ಮುಂದೆ ಬರಬೇಕಾದರೆ ಆ ಜನಾಂಗದ ದುರ್ಬಲರ ಮತ್ತು ದರಿದ್ರರ ಮಟ್ಟವನ್ನು ಎತ್ತುವುದಕ್ಕಿಂತ ಅಲ್ಲಿಯ ಪ್ರತಿಭಾವಂತರಿಗೆ ವಿದ್ಯೆ ಮತ್ತು ಶಿಕ್ಷಣ ದೊರೆಯುವಂತೆ ಮಾಡಿ ಅದರಿಂದ ದೇಶೋದ್ಧಾರವಾಗುವಂತೆ ಮಾಡುವುದು ಹೆಚ್ಚು ಉತ್ತಮವೆಂದು ಇವರ ಅಭಿಪ್ರಾಯವಾಗಿತ್ತು. ಈ ಉದ್ದೇಶದಿಂದ ಇವರು 1898ರ ಸೆಪ್ಟೆಂಬರಿನಲ್ಲಿ ಬೊಂಬಾಯಿ ಪಟ್ಟಣದಲ್ಲಿದ್ದ ತಮ್ಮ ಆಸ್ತಿಯಲ್ಲಿ 30 ಲಕ್ಷ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಈ ಸಂಸ್ಥೆಯ ಸ್ಥಾಪನೆಗೆಂದು ತೆಗೆದಿರಿಸಿದರು. ಮೊದಲು ತಾತಾರವರು ಈ ವಿಷಯದಲ್ಲಿ ಭಾರತದ ಮತ್ತು ಬ್ರಿಟನ್ನಿನ ತಜ್ಞರ ಸಲಹೆ ಕೇಳಿ ಈ ಸಂಸ್ಥೆಗೋಸ್ಕರ ಒಂದು ಕರಡುಪ್ರತಿ ತಯಾರಿಸಲು ಒಂದು ಹಂಗಾಮಿ ಸಮಿತಿಯನ್ನು ನೇಮಿಸಿದರು. 1898ರ ಡಿಸೆಂಬರಿನಲ್ಲಿ ಈ ಸಮಿತಿ ತಯಾರಿಸಿದ ಯೋಜನೆಯನ್ನು ವೈಸ್‍ರಾಯ್ ಲಾರ್ಡ್ ಕರ್ಜನ್‍ರವರ ಮುಂದಿಡಲಾಯಿತು. ಭಾರತ ಸರ್ಕಾರ ಇದನ್ನು ಅಂಗೀಕರಿಸಿ ಇದಕ್ಕೆ ಬೇಕಾದ ಕಾನೂನನ್ನು ಜಾರಿಗೆ ತರಲು ಒಪ್ಪಿಕೊಂಡಿತು. ತಾತಾರವರ ಮಿತ್ರರೂ ಮೈಸೂರಿನ ದಿವಾನರೂ ಆಗಿದ್ದ ಸರ್. ಕೆ. ಶೇಷಾದ್ರಿ ಅಯ್ಯರ್‍ರವರು ಬೆಂಗಳೂರಿನ ಉತ್ತರದಲ್ಲಿ 372 ಎಕರೆ ಭೂಮಿಯನ್ನು ಈ ಸಂಸ್ಥೆಗೋಸ್ಕರ ಮೈಸೂರು ಸರ್ಕಾರ ಕೊಡುವುದಾಗಿ ತಿಳಿಸಿದರು.

	ಸಮಿತಿ ತಯಾರಿಸಿದ ಯೋಜನೆಯನ್ನು ಸಮರ್ಥ ಮಾರ್ಗದರ್ಶನ ನೀಡಿ ಪರಿಪೂರ್ಣಗೊಳಿಸಲು ಲಂಡನ್ ವಿಶ್ವವಿದ್ಯಾನಿಲಯದ ಸರ್ ವಿಲಿಯಂ ರ್ಯಾಂಸೇ, ಮೆಲ್‍ಬೊರ್ನ್ ವಿಶ್ವವಿದ್ಯಾನಿಲಯದ ಓರ್ಮ್‍ಮಾಸನ್ ಮತ್ತು ರೂರ್ಯಿ ಎಂಜಿನಿಯರಿಂಗ್ ಕಾಲೇಜಿನ ಲೆಫ್ಟಿನಂಟ್ ಕರ್ನಲ್ ಕ್ಲಿಬರ್ನ್‍ರವರ ಸಹಾಯ ಪಡೆಯಲಾಯಿತು. ಇವರೆಲ್ಲರ ಅಭಿಪ್ರಾಯ ಈ ಸಂಸ್ಥೆಯನ್ನು ಅನ್ವಯ ವಿe್ಞÁನಕ್ಕೆ ಮೀಸಲಾಗಿಟ್ಟು ವಿದ್ಯಾರ್ಥಿಗಳಿಗೆ ಪ್ರಯೋಗ ಮಾರ್ಗಗಳಲ್ಲಿ ತರಬೇತು ಕೊಡಬೇಕು. ಇಲ್ಲಿ ಸ್ವತಂತ್ರವಾದ ಸಂಶೋಧನೆಗಳನ್ನು ನಡೆಸುತ್ತ ಅವುಗಳಲ್ಲಿ ಒದಗಬಹುದಾದ ಸಮಸ್ಯೆಗಳಿಗೆ ಅಂತಿಮ ನಿರ್ಣಯ ನೀಡುವ ಅಧಿಕಾರ ಈ ಸಂಸ್ಥೆಯೇ ಹೊಂದಿರಬೇಕು-ಎಂದಿತ್ತು.

	ತಮ್ಮ ಕನಸು ನನಸಾಗುವುದಕ್ಕೆ ಮುಂಚೆಯೇ ತಾತಾರವರು 1904ರಲ್ಲಿ ಯೂರೋಪಿನಲ್ಲಿ ನಿಧನರಾದರು. ಆದರೆ ಅವರ ಮಕ್ಕಳು ಸರ್ ದೊರಾಬ್ ತಾತಾ ಮತ್ತು ಸರ್ ರತನ್ ತಾತಾರವರು ತಮ್ಮ ತಂದೆಯವರ ಅಭಿಲಾಷೆಯನ್ನು ಪೂರ್ತಿಗೊಳಿಸುವುದಾಗಿ ತಿಳಿಸಿದರು.

	ಮೈಸೂರು ಸರ್ಕಾರ ಸಂಸ್ಥೆಗೆ ಸ್ಥಳ ನೀಡಿತು. ಅಲ್ಲದೆ ಆರಂಭದ ಬಂಡವಾಳವಾಗಿ 5 ಲಕ್ಷ ರೂಪಾಯಿಗಳನ್ನೂ ವಾರ್ಷಿಕ ಸಹಾಯ ಧನವಾಗಿ 5,000 ರೂಪಾಯಿಗಳನ್ನೂ ಕೊಡುವುದಾಗಿ ಆಶ್ವಾಸಿಸಿತು. ಈ ಸಂಸ್ಥೆಯ ಸ್ಥಾಪನೆಯಲ್ಲಿ ಮೈಸೂರು ಸರ್ಕಾರ ವಹಿಸಿದ ಪಾತ್ರ ಬಲು ಹಿರಿಯದು. ಆರಂಭದ ಬಂಡವಾಳವೆಂದು 2 1/2 ಲಕ್ಷ ರೂಪಾಯಿಗಳನ್ನು ಪ್ರತಿವರ್ಷ 1 1/2 ಲಕ್ಷ ರೂಪಾಯಿಗಳಿಗೆ ಹೆಚ್ಚಿಲ್ಲದಂತೆ ಸಹಾಯಧನವನ್ನೂ ಆಗ ಗ್ರಾಂಟ್-ಇನ್-ಏಡ್ ಸಂಸ್ಥೆಗಳಿಗೆ ಕೊಡುತ್ತಿದ್ದಂತೆ ಸ್ಥಳೀಯ ಆದಾಯದ ಆಧಾರದ ಮೇಲೆ ಕೊಡುವುದಾಗಿ ಭಾರತ ಸರ್ಕಾರ ಒಪ್ಪಿತು.

	ರಾಯಲ್ ಸೊಸೈಟಿಯವರ ಸಲಹೆಯಂತೆ ಡಾ. ಮಾರಿಸ್ ಡಬ್ಲ್ಯು ಟ್ರಾವರ್ಸ್, ಅವರನ್ನು ಇದರ ಮೊದಲ ನಿರ್ದೇಶಕರಾಗಿ (ಡೈರೆಕ್ಟರ್) ನೇಮಿಸಲಾಯಿತು. 19ಂ6ನೆಯ ಆಗಸ್ಟಿನಲ್ಲಿ ನೇಮಿತರಾದ ಡಾ. ಟ್ರಾವರ್ಸ್ ರವರು ಅದೇ ನವಂಬರಿನಲ್ಲಿ ಭಾರತಕ್ಕೆ ಬಂದು ಸರ್ ದೊರಾಬ್ ತಾತಾ, ಸರ್ ರತನ್ ತಾತಾರೊಂದಿಗೂ ಭಾರತ ಸರ್ಕಾರ ಮತ್ತು ಮೈಸೂರು ಸರ್ಕಾರಗಳೊಡನೆಯೂ ಸಮಾಲೋಚನೆ ನಡೆಸತೊಡಗಿದರು.

	ಯಾವ ಕಾನೂನೇ ಆಗಲಿ ಜಾರಿಗೆ ಬಂದಮೇಲೆ ಅದನ್ನು ಬದಲಾಯಿಸುವುದು ಸುಲಭವಲ್ಲ. ಈ ಸಂಸ್ಥೆ ಆ ಕಾಲಕ್ಕೆ ವಿನೂತನ ಪ್ರಯೋಗವಾಗಿತ್ತು. ಸಂಸ್ಥೆಯ ಭವಿಷ್ಯದ ಹಿತದೃಷ್ಟಿಯಿಂದ ಇದಕ್ಕಾಗಿ ಹೊಸ ಕಾನೂನನ್ನು ಆಗ ಮಾಡಲಿಲ್ಲ. ಬದಲು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸೌಲಭ್ಯವಿದ್ದ 1890ರ ಚಾರಿಟಬಲ್ ಎಂಡೋಮೆಂಟ್ ಆಕ್ಟ್ ಎಂಬ ಕಾನೂನಿನ ಪ್ರಕಾರ ಭಾರತ ಸರ್ಕಾರದ ಗೃಹ ಇಲಾಖೆ 1909ರ ಮೇ 27ನೆಯ ತಾರೀಖು ತಾತಾರವರು ಈ ಸಂಸ್ಥೆಗಾಗಿ ಇರಿಸಿದ್ದ ಆಸ್ತಿಪಾಸ್ತಿಗಳನ್ನು ಒಂದು ನ್ಯಾಸಮಂಡಲಿಗೆ ವಹಿಸಿಕೊಟ್ಟಿದೆಯೆಂಬ ಆಜ್ಞೆಯನ್ನು ಹೊರಡಿಸಿತು. ಸರ್ಕಾರದ ಹೇಳಿಕೆ ಹೀಗಿತ್ತು : "ಈ ಯೋಜನೆಯ ಪ್ರವರ್ತಕರ ಧ್ಯೇಯಗಳ ಬಗೆಗೆ ಸರ್ಕಾರಕ್ಕೆ ಹಾರ್ದಿಕ ಸಹಾನುಭೂತಿ ಇದ್ದರೂ ಗೌರ್ನರ್ ಜನರಲ್‍ರವರು ಈ ಸಂಸ್ಥೆಯ ಆಡಳಿತದೊಡನೆ ನಿಕಟ ಸಂಪರ್ಕ ಇಟ್ಟುಕೊಳ್ಳಲು ಇಚ್ಚಿಸುವುದಿಲ್ಲ. ಇಲ್ಲಿ ಎಂಥ ಸಂಶೋಧನೆಗಳು ನಡೆಯಬೇಕೆಂದಾಗಲೀ ಬೋಧನ ಮಾರ್ಗ ಹೇಗಿರಬೇಕೆಂದಾಗಲೀ ನಿರ್ಧರಿಸುವ ಹಕ್ಕು ತಮ್ಮದೇ ಆಗಿರಬೇಕೆಂದು ಆಶಿಸುವುದಿಲ್ಲ. ಸಂಸ್ಥೆ ಪ್ರೋತ್ಸಾಹಿಸಿ ನಡೆಸುವ ಬೌದ್ಧಿಕ ಚಟುವಟಿಕೆಗಳು ಮತ್ತು ಆರ್ಥಿಕ ಉದ್ಯಮಗಳ ಬೆಳವಣಿಗೆಯಲ್ಲಿ ಯಾವ ರೀತಿಯಲ್ಲೂ ಮಧ್ಯೆ ಪ್ರವೇಶಿಸಬಾರದೆಂಬುದು ಸರ್ಕಾರದ ಅಪೇಕ್ಷೆ. ಸರ್ಕಾರ ಇದಕ್ಕೆ ಗಣನೀಯ ಪ್ರಮಾಣದಲ್ಲಿ ಸಹಾಯದ್ರವ್ಯ ನೀಡುವುದರಿಂದ ಸಂಸ್ಥೆಯ ಮೇಲೆ ಆದಷ್ಟು ಕಡಿಮೆ ಹತೋಟಿಯನ್ನಿಟ್ಟುಕೊಳ್ಳಬಹುದು."

	1911ರ ಫೆಬ್ರವರಿ ಒಂದನೆಯ ತಾರೀಖು ಈ ಸಂಸ್ಥೆಯ ಪ್ರಧಾನ ಕಟ್ಟಡದ ಶಂಕುಸ್ಥಾಪನೆಯನ್ನು ಆಗ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರವರು ನೆರವೇರಿಸಿದರು. ಸುವ್ಯವಸ್ಥಿತ ರೀತಿಯಲ್ಲಿ ವೈe್ಞÁನಿಕ ಸಂಶೋಧನೆ ಅಂದಿನಿಂದ ಭಾರತದಲ್ಲಿ ಮೊದಲಾಯಿತು.

	ಅಂದಿನಿಂದ ಇದುವರೆಗೂ ದಕ್ಷರಾದ ನಿರ್ದೇಶಕರು ಈ ಸಂಸ್ಥೆಗೆ ಯೋಗ್ಯ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಡಾ.ಟ್ರಾವರ್ಸ್‍ರವರಾದ ಮೇಲೆ ಸರ್ ಎ. ಜಿ. ಬೊರ್ನ್ (1915-21), ಸರ್ ಎಂ. ಒ. ಫಾರೆಸ್ಟರ್, ಎಫ್.ಆರ್.ಎಸ್. (1922-33). ಸರ್. ಸಿ. ವಿ. ರಾಮನ್. ಎಫ್. ಆರ್. ಎಸ್; ಎನ್.ಎಲ್; (1933-37), ಸರ್ ಜೆ. ಸಿ. ಫೋಷ್ (1939-48). ಪ್ರೊ:ಎಂ.ಎಸ್. ಥ್ಯಾಕರ್ (1949-55), ಡಾ. ಎಸ್. ಭಗವಂತಂ (1957-62) ಮತ್ತು ಡಾ. ಎಸ್. ಧಾವನ್ (1962- ) ಇವರೇ ನಿರ್ದೇಶಕರು.

	ವಿವಿಧ ವಿಭಾಗಗಳು : 1911ರಲ್ಲಿ ಇಲ್ಲಿ ಸಾಮಾನ್ಯ ಮತ್ತು ಅನ್ವಯ ರಾಸಾಯನಿಕ ವಿe್ಞÁನ ವಿಭಾಗಗಳು ಕೆಲಸಮಾಡಲಾರಂಭಿಸಿದುವು. 1911ರ ಜುಲೈಯಲ್ಲಿ ಮೊಟ್ಟಮೊದಲು ಇಲ್ಲಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡರು. ಮುಂದೆ ಕೆಲವು ಕಾಲದಲ್ಲೇ ಇಂಗಾಲ ರಸಾಯನಶಾಸ್ತ್ರ ವಿಭಾಗ ಪ್ರಾರಂಭವಾಯಿತು. 1921ರಲ್ಲಿ ಜೀವ ರಸಾಯನಶಾಸ್ತ್ರ ವಿಭಾಗವನ್ನೂ 1933ರಲ್ಲಿ ಭೌತಶಾಸ್ತ್ರ ವಿಭಾಗವನ್ನೂ ತೆರೆದರು.

	ದೇಶದ ಅತ್ಯುತ್ತಮ ಪ್ರಯೋಗಶಾಲೆಗಳು ಇಲ್ಲಿಯೇ ಇದ್ದುದರಿಂದ ಎರಡನೆಯ ಮಹಾಯುದ್ಧದ ಕಾಲದಲ್ಲಿ ವೈe್ಞÁನಿಕ ಮತ್ತು ಔದ್ಯೋಗಿಕ ಸಂಶೋಧನ ಸಂಸ್ಥೆ (ಸಿ.ಎಸ್.ಐ.ಆರ್.), ಭಾರತೀಯ ವ್ಯವಸಾಯ ಸಂಶೋಧಕ ಸಂಸ್ಥೆ, ಭಾರತೀಯ ವೈದ್ಯಶಾಸ್ತ್ರ ಸಂಶೋಧನ ಸಂಸ್ಥೆ ಮತ್ತು ತಮಿಳುನಾಡು ಮತ್ತು ಮೈಸೂರು ಸರ್ಕಾರಗಳು-ಇವೆಲ್ಲ ಮುಂದಿಟ್ಟ ಸಮಸ್ಯೆಗಳ ಅಧ್ಯಯನವನ್ನು ಇನ್‍ಸ್ಟಿಟ್ಯೂಟ್ ವಹಿಸಿಕೊಂಡಿತು. ಅಲ್ಲದೆ ರಕ್ಷಣಾ ದಳದೊಡನೆಯೂ ಸಹಕರಿಸಿ ಹಲವು ಸಂಶೋಧನೆಗಳನ್ನು ನಡೆಸಿತು.

	1942ರಿಂದೀಚೆಗೆ ಅನ್ವಯಗಣಿತ, ಹೈ ಓಲ್ಟೇಜ್ ಎಂಜಿನಿಯರಿಂಗ್ ಮುಂತಾದ ಹತ್ತೊಂಬತ್ತು. ವ್ಯಾಸಂಗ ವಿಭಾಗಗಳನ್ನು ತೆರೆದಿದ್ದಾರೆ.

	1956ರ ಪಂಚವಾರ್ಷಿಕ ಯೋಜನೆಯ ಅಂಗವಾಗಿ ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೋಸ್ಕರ ಆಟೋಮೊಬೈಲ್ ಎಂಜಿನಿಯರಿಂಗ್ (1956), ಸಾಯಿಲ್ ಮೆಕ್ಯಾನಿಕ್ಸ್ ಮತ್ತು ಫೌಂಡೇಷನ್ ಎಂಜಿನಿಯರಿಂಗ್ (1957), ಫೌಂಡ್ರಿ ಎಂಜಿನಿಯರಿಂಗ್ (1956). ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ (1956), ಅಲ್ಟ್ರಾ ಎಂಜಿನಿಯರಿಂಗ್ ಮತ್ತು ಅಕೌಸ್ಟಿಕಲ್ ಎಂಜಿನಿಯರಿಂಗ್-ಮುಂತಾದ ಅನೇಕ ವಿಷಯಗಳಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ.

	ಪುಸ್ತಕ ಭಂಡಾರ : ಇಲ್ಲಿ ಅತ್ಯುತ್ತಮವಾದ ಪುಸ್ತಕ ಭಂಡಾರವಿದೆ. ಇದರಲ್ಲಿ 1,25,000ಕ್ಕಿಂತಲೂ ಹೆಚ್ಚು ಪುಸ್ತಕಗಳಿವೆಯಲ್ಲದೆ ಮುಖ್ಯ ನಿಯತಕಾಲಿಕಗಳು ಬರುತ್ತಿವೆ. ಅಲ್ಲದೆ ಅನೇಕ ಅಂತರರಾಷ್ಟ್ರೀಯ ವಿe್ಞÁನ ಸಂಸ್ಥೆಗಳ ತಾಂತ್ರಿಕ ವರದಿಗಳು, ಭಾರತೀಯ, ಅಮೆರಿಕನ್ ಮತ್ತು ಬ್ರಿಟಿಷ್ ಮಾಸಿಕಗಳು ಮತ್ತು ಭಾರತದ ಪೇಟೆಂಟುಗಳು ಇಲ್ಲಿಗೆ ಬರುತ್ತವೆ.

	ಕಟ್ಟಡದ ನಿಯೋಜನೆ ಭಾರತದಲ್ಲೇ ಅತ್ಯುತ್ತಮವಾದುದೆಂದು ಪ್ರಾಜ್ಞರ ಅಭಿಪ್ರಾಯ. ಬೇಕೆಂದಾಗ ಮೈಕ್ರೊ ಫಿಲ್ಮುಗಳು ಫೋಟೊ ಕಾಪಿಗಳನ್ನೂ, ಇನ್ಸಡಾಕಿನ ಪ್ರಾದೇಶಿಕ ಶಾಖೆ ತಯಾರಿಸಿಕೊಡುತ್ತದೆ ಮತ್ತು ಗ್ರಂಥ ವಿವರಣಾ ಪಟ್ಟಿಗಳನ್ನೂ ಒದಗಿಸುತ್ತದೆ.

	ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಬ ತ್ರೈಮಾಸಿಕ ಪತ್ರಿಕೆ ಇನ್‍ಸ್ಟಿಟ್ಯೂಟಿನ ವಿವಿಧ ವಿಭಾಗಗಳಲ್ಲಿ ನಡೆದ ಸ್ವತಂತ್ರ ಸಂಶೋಧನೆಗಳ ವಿಷಯವನ್ನು ಪ್ರಕಟಿಸುತ್ತದೆ.

	ವಿದ್ಯಾರ್ಥಿಗಳು ಸ್ಥಳದಲ್ಲೇ ಇದ್ದು ತಮ್ಮ ಪೂರ್ಣಕಾಲವನ್ನು ವ್ಯಾಸಂಗಕ್ಕಾಗಿ ವಿನಿಯೋಗಮಾಡಲೆಂಬ ಉದ್ದೇಶದಿಂದ ಸುಸಜ್ಜಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ್ದಾರಲ್ಲದೆ ವಿದ್ಯಾಮಂದಿರದ ವತಿಯಿಂದ ಒಂದು ಆಸ್ಪತ್ರೆಯನ್ನೂ ನಡೆಸುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಪುಲವಾದ ವಿದ್ಯಾರ್ಥಿವೇತನಗಳನ್ನು ಕೊಡುವ ವ್ಯವಸ್ಥೆಯೂ ಇದೆ.

	ಇನ್‍ಸ್ಟಿಟ್ಯೂಟ್ ಜಂಖಾನ : ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಪಠ್ಯೇತರ ಚಟುವಟಿಕೆಗಳು ನಡೆಯುತ್ತವೆ. ಇದು 1912ರಲ್ಲಿ ಸ್ಥಾಪಿತವಾಯಿತು. ಜಸ್ಟಿಸ್ ರಾನಡೆಯವರ ಹೆಸರಿನ ಒಂದು ವಾಚನಾಲಯ ಮತ್ತು ಪುಸಕ್ತ ಭಂಡಾರ. ಈಜುಕೊಳ, ವ್ಯಾಯಾಮ, ಶಾಲೆ, ರೈಫಲ್ ಕ್ಲಬ್, ಸಂಗೀತ ಮತ್ತು ಸಾಹಿತ್ಯ ಸಂಘ. ಸಿನಿಮಾಸಂಘ ಮತ್ತು ಒಂದು ಅಂಗಡಿ ಸಹ ಇದರಲ್ಲಿವೆ. ಕಳೆದ ಕೆಲವು ವರ್ಷಗಳಿಂದ ಇದು ಒಂದು ಪತ್ರಿಕೆಯನ್ನೂ ಹೊರಡಿಸುತ್ತಿದೆ.

	ವೈe್ಞÁನಿಕ ಸಂಘಗಳು ಮತ್ತು ಸಮಿತಿಗಳು : ಈ ಕೆಳಗಿನ ಸಂಘಗಳು ಇನ್‍ಸ್ಟಿಟ್ಯೂಟ್‍ನಲ್ಲಿ ಆಗಿಂದ್ದಾಗ್ಗೆ ಭಾಷಣಗಳು, ಸಭೆಗಳು ಮತ್ತು ವಿಚಾರಗೋಷ್ಠಿಗಳನ್ನೇರ್ಪಡಿಸುವುವು. 1 ಭಾರತೀಯ ವೈe್ಞÁನಿಕ ಕೆಲಸಗಾರರ ಸಂಘ; 2 ಜೀವ ರಸಾಯನ ಶಾಸ್ತ್ರ ಸಂಘ; 3 ಬ್ರಿಟಿಷ್ ರೇಡಿಯೋ ಎಂಜಿನಿಯರುಗಳ ಸಂಘದ ಭಾರತೀಯ ವಿಭಾಗದ ಬೆಂಗಳೂರು ಶಾಖೆ; 4 ಕೆಮಿಕಲ್ ಎಂಜಿನಿಯರಿಂಗ್ ಅಸೋಸಿಯೇಷನ್; 5 ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಸೊಸೈಟಿ; 6 ಎಲೆಕ್ಟ್ರೋ ಕೆಮಿಕಲ್ ಸೊಸೈಟಿಯ ಭಾರತೀಯ ಶಾಖೆ : 7 ಎಂಜಿನಿಯರಿಂಗ್ ಸೊಸೈಟಿ; 8 ಭಾರತೀಯ ಲೋಹ ಇನ್‍ಸ್ಟಿಟ್ಯೂಟಿನ ಬೆಂಗಳೂರು ಶಾಖೆ; 9 ರಾಯಲ್ ಇನ್‍ಸ್ಟಿಟ್ಯೂಟ್ ಆಫ್ ಕೆಮಿಸ್ಟ್ರಿಯ ಬೆಂಗಳೂರು ಶಾಖೆ; 1ಂ ಭಾರತೀಯ ವೈe್ಞÁನಿಕ ಫಿಲ್ಮ್ ಸೊಸೈಟಿ; 11 ಜೈವಿಕ ರಸಾಯನ ಶಾಸ್ತ್ರಜ್ಞರ ಸಂಘ.

	ಈ ಯೋಜನೆ ಆಗಿಂದಾಗ ಬದಲಾಯಿಸುತ್ತ ಬಂದಿದೆ. 1951ರಲ್ಲಿ ಜಾರಿಗೆ ಬಂದ ಯೋಜನೆಯಂತೆ ಈ ಸಂಸ್ಥೆಯ ಅಧಿಕಾರ ನಿರ್ವಹಣಾ ವರ್ಗ ಈ ಕೆಳಕಂಡಂತಿದೆ : ಸಮೀಕ್ಷಕ (ವಿಸಿಟರ್) : 2 ಕೋರ್ಟು; 3 ಕೌನ್ಸಿಲ್; 4 ಹಣಕಾಸಿನ ಸಮಿತಿ; 5 ಸೆನೇಟು; 6 ಫ್ಯಾಕಲ್ಟಿಗಳು; 7 ಆಸ್ತಿಗಳ ಮೇಲ್ವಿಚಾರಕರು; 8 ಧರ್ಮದರ್ಶಿ ಮಂಡಲಿ, 9 ನಿರ್ದೇಶಕ (ಡೈರೆಕ್ಟರ್).

	ಸಂಸ್ಥೆಯ ಆದಾಯ ಮತ್ತು ವ್ಯಯ : ಸುಮಾರು 1949ರ ವರೆಗೂ ಇದರ ಆದಾಯದ ಹೆಚ್ಚು ಭಾಗ ತಾತಾರವರ ಪುದುವಟ್ಟಿನಿಂದ ಹಾಗೂ ಮೈಸೂರು ಮತ್ತು ಕೇಂದ್ರ ಸರ್ಕಾರಗಳಿಂದ ಬರುತ್ತಿತ್ತು. ಅಲ್ಲಿಂದೀಚೆಗೆ ಇದಕ್ಕೆ ಕೇಂದ್ರ ಸರ್ಕಾರ ಧಾರಾಳವಾಗಿ ಹಣ ಕೊಡುತ್ತಿದೆ. 1911-12ರಲ್ಲಿ 1,48,000 ರೂಪಾಯಿಗಳು ಖರ್ಚು ಆಗುತ್ತಿದ್ದು 1968ರಲ್ಲಿ 1,12,43,134 ರೂಪಾಯಿಗಳಿಗೇರಿದೆ.

	ಹೀಗೆ ಈ ಸಂಸ್ಥೆ ಜನ್ಮ ತಳೆದಂದಿನಿಂದ ಇದುವರೆಗೂ ಅಭಿವೃದ್ಧಿಯಾಗುತ್ತ ಬಂದಿದೆ. ಇದನ್ನು ಸ್ಥಾಪಿಸಿದುದರ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಒದಗಿಸಿ ವಿe್ಞÁನದ ಎಲ್ಲ ಶಾಖೆಗಳಲ್ಲೂ ಮುಖ್ಯವಾಗಿ ಭಾರತದ ಔದ್ಯೋಗಿಕ ಮತ್ತು ಸಾಂಪತ್ತಿಕ ಬೆಳೆವಣಿಗೆಗೆ ಸಹಾಯಮಾಡಬಹುದಾದ ಶಾಖೆಗಳಲ್ಲಿ ಸ್ವತಂತ್ರ ಸಂಶೋಧನೆ ನಡೆಸುವುದು ಎಂದಿದೆ. ಭಾರತದ ಮುನ್ನಡೆಯಲ್ಲಿ ಈ ಸಂಸ್ಥೆ ಹಿರಿಯ ಪಾತ್ರ ವಹಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. 			
 (ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ